Kannada Kalpavruksha – ಕನ್ನಡ ಕಲ್ಪವೃಕ್ಷ

Kannada Kalpavruksha – ಕನ್ನಡ ಕಲ್ಪವೃಕ್ಷ

ಲೇಖಕ ಆತ್ಮಾನಂದಕ್ಕಾಗಿ ಬರೆಯುತ್ತಾನೆ; ಪ್ರಕಾಶಕ ಈ ಆನಂದವನ್ನು ವಿಸ್ತರಿಸಿ ಎಲ್ಲರಿಗೂ ಹಂಚುವ ಹೊಣೆ ಹೊರುತ್ತಾನೆ; ಗ್ರಂಥಾಲಯ ಇಲ್ಲಿ ಬಲು ದೊಡ್ಡ ಕೊಂಡಿ!! ಅದೇ ಸಮಸ್ಯೆಗಳ ಆಗರ ಕೂಡ. ಓದುಗನನ್ನು ಮುಟ್ಟಿ, ‘ಬಲ’ವಾಗಿ ತಟ್ಟಿ, ಕನ್ನಡದ ಓದನ್ನು ವ್ಯಾಪಕಗೊಳಿಸುವ ಪ್ರಯತ್ನ’ಕನ್ನಡ ಕಲ್ಪವೃಕ್ಷ’ಲೇಖಕರನ್ನು, ಪ್ರಕಾಶಕರನ್ನು ಸೇರಿಸಿ ಕನ್ನಡದ ಓದನ್ನು ಹೆಚ್ಚಿಸುವಲ್ಲಿ ಇರಬಹುದಾದ ಸಮಸ್ಯೆಗಳ ನಿವಾರಣೆಗೆ ಎಲ್ಲರೂ ಸೇರಿ ಪ್ರಯತ್ನಿಸುವ ಒಂದು ಪುಟ್ಟ ವೇದಿಕೆ.

ಯುವಾ ಬ್ರಿಗೇಡ್ ನಡೆಸಿರುವ ಕನ್ನಡ ಕಲ್ಪವೃಕ್ಷ ಕಾರ್ಯಕ್ರಮಗಳ ವಿವರಗಳು

  • ಕನ್ನಡ ಕಲ್ಪವೃಕ್ಷ ಕಾರ್ಯಕ್ರಮದ ಮೊದಲ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು, ಉದ್ಘಾಟನೆ ಮಾಡಿ ಮಾತನಾಡಿದ ವಿಜಯ ಕರ್ನಾಟಕದ ಮುಖ್ಯಸ್ಥರಾದ ಶ್ರೀ ಹರಿಪ್ರಕಾಶ್ ಕೋಣೆಮನೆಯವರು ಓದನ್ನು ವಿಸ್ತಾರಗೊಳಿಸುವ ಕುರಿತಂತೆ ವಿಶೇಷ ಚರ್ಚೆ ಮಾಡಿದರು. ಅವರ ಕಲ್ಪನೆಯ ಗ್ರಂಥಾಲಯ ಹಬ್ಬವನ್ನು ಯುವಾಬ್ರಿಗೇಡ್ ಬರುವ ದಿನಗಳಲ್ಲಿ ನನಸಾಗಿಸಲಿದೆ. ಭಾರತೀಯ ವಿಚಾರಧಾರೆಗಳಿಗೆ ಸೂಕ್ತ ಪ್ರಕಾಶಕರು ಬೇಕೆಂಬ ಕಲ್ಪನೆಯಿಂದಲೇ ಹುಟ್ಟಿಕೊಂಡ ದೆಹಲಿ ಮೂಲದ ಗರುಡ ಪ್ರಕಾಶನದ ಮುಖ್ಯಸ್ಥರಾದ ಸಂಕ್ರಾಂತ್ ಸನು ಅಮೇರಿಕಾದಿಂದ webinar ನ ಮೂಲಕ ಸಂಬೋಧಿಸಿದರು. ಲೇಖಕನಿಂದ ಓದುಗನನ್ನು ತಲುಪುವವರೆಗಿನ ಭಿನ್ನ ಭಿನ್ನ ಸ್ತರವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರು, Dharma dispatch ನ ಸಂದೀಪ್ ಬಾಲಕೃಷ್ಣ ಭಾರತೀಯ ಚಿಂತನೆಯನ್ನು ಮೂಲೆ ಗುಂಪಾಗಿಸುವಲ್ಲಿ ಎಡಪಂಥೀಯರು ನಡೆಸಿದ ವ್ಯವಸ್ಥಿತ ಷಡ್ಯಂತ್ರವನ್ನು ಮನಮುಟ್ಟುವಂತೆ ವಿವರಿಸಿದರು. ಎಲ್ಲರ ಮನಮುಟ್ಟಿದ್ದು ಶ್ರೀಯುತ ಎಸ್.ಆರ್ ರಾಮಸ್ವಾಮಿಗಳ ಸಾನ್ನಿಧ್ಯ. ನಿಜಕ್ಕೂ ಲೇಖಕನೊಬ್ಬನಿಗೆ ಅವರ ಮಾತು ದಿಕ್ಕು ತೋರಿಸುವಂತಿತ್ತು. ‘ಭೌತಿಕತೆ ಮತ್ತು ಭೌತಾತೀತಗಳ ನಡುವೆ ಲೇಖಕ ಸೇತುವೆಯಾಗಿರುತ್ತಾನೆ’ ಎಂಬ ಅವರ ಮಾತು ಮನತಟ್ಟುವಂತಿತ್ತು. ಎಂದಿನಂತೆ ಪ್ರಕಾಶ್ ಬೆಳವಾಡಿಯವರು ತಂತ್ರಜ್ಞಾನವನ್ನು ಬಳಸಿ ಹೇಗೆ ಬರವಣಿಗೆಯ ಕ್ಷೇತ್ರವನ್ನು ಶ್ರೀಮಂತಗೊಳಿಸಬಹುದೆಂದು ವಿವರಿಸಿದರು. ಆಯೋಜಕರಿಗೆ ಸಾಕಷ್ಟು ಕೆಲಸವನ್ನೂ ಹೇಳಿ ಮುಂದಿನ ದಿನಗಳ ದಿಕ್ಕನ್ನು ನಿಶ್ಚಯಿಸುವಂತೆ ಮಾಡಿದರು. ಈ ನಡುವೆಯೇ ಪ್ರಕಾಶಕರ ಸಮಸ್ಯೆಗಳನ್ನು, ಓದುಗನನ್ನು ಮುಟ್ಟಲು ಆಗುತ್ತಿರುವ ತೊಂದರೆಗಳನ್ನು ಪಟ್ಟಿ ಮಾಡಿ, ಸಂಬಂಧಪಟ್ಟ ಮಂತ್ರಿಗಳಿಗೆ ಅದನ್ನು ತಲುಪಿಸುವುದೆಂದು ನಿಶ್ಚಯಿಸಲಾಯ್ತು. ಬರಲಿರುವ ದಿನಗಳಲ್ಲಿ ಕನ್ನಡದ ಕಂಪನ್ನು ರಾಷ್ಟ್ರಮಟ್ಟಕ್ಕೆ ಮುಟ್ಟಿಸಲು ತರಬಹುದಾಗಿರುವ ಭಿನ್ನ ಭಿನ್ನ ಸಾಹಿತ್ಯಗಳ ಪಟ್ಟಿಯನ್ನೂ ಮಾಡಲಾಯ್ತು.

  • ಧಾರವಾಡದ ರಂಗಾಯಣದಲ್ಲಿ “ಕನ್ನಡ ಕಲ್ಪವೃಕ್ಷ”ದ ಎರಡನೇ ಕಾರ್ಯಕ್ರಮ ನಡೆಯಿತು. ಲೇಖಕರು ಮತ್ತು ಪ್ರಕಾಶಕರ ಸಮಸ್ಯೆಗಳು ಮತ್ತು ಭವಿಷ್ಯದ ದಿಕ್ಕಿನ ಕುರಿತ ಚರ್ಚೆ ಇದು. ಭಾರತದ ಮೇಲೆ ನಡೆಯುತ್ತಿರುವ ವೈಚಾರಿಕ ಆಕ್ರಮಣಗಳ ಕುರಿತಂತೆ, ಕನ್ನಡದ ಓದಿನ ಹವ್ಯಾಸವನ್ನು‌ ಹಿಗ್ಗಿಸುವ ಕುರಿತಂತೆ ವಿಸ್ತಾರವಾದ ಚರ್ಚೆ ನಡೆಯಿತು.‌ ಮನೋಹರ ಗ್ರಂಥಮಾಲೆಯ ಪ್ರಕಾಶಕರಾದ ಶ್ರೀ ರಮಾಕಾಂತ್ ಜೋಷಿಯವರು ಉದ್ಘಾಟಿಸಿ ಆಡಿದ ಮಾತುಗಳು ಸಮರ್ಥ ಭೂಮಿಕೆಯನ್ನು ಒದಗಿಸಿದರೆ,‌ ವೃಷಾಂಕ್ ಭಟ್ ಮತ್ತು ರೋಹಿತ್ ಚಕ್ರತೀರ್ಥ ಅದರ ಆಧಾರದ ಮೇಲೆಯೇ ತಮ್ಮ ಮುಂದಿನ ಮಾತುಗಳನ್ನು ಪ್ರಸ್ತುತ ಪಡಿಸಿದರು. ಹಿರಿಯರಾದ ಶ್ರೀಯುತ ಕಾಖಂಡಕಿಯವರು ಸಾಕಷ್ಟು ಸಲಹೆಗಳನ್ನು ನೀಡಿ ಮಾರ್ಗದರ್ಶನ ಮಾಡಿದರು. ಅನೇಕ ತರುಣ‌ ಲೇಖಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

top