ಪ್ರೇರಣಾ ಪ್ರವಾಹ-Prerana Pravaha

ಪ್ರೇರಣಾ ಪ್ರವಾಹ-Prerana Pravaha

“prerana pravaha” is a special interaction with the best people in education field with our government school teachers to help enhance their ability in teaching.
“ಪ್ರೇರಣಾ ಪ್ರವಾಹ” ಶಿಕ್ಷಕರಿಗಾಗಿ ಹಮ್ಮಿಕೊಂಡಿರುವ ಯುವಾ ಬ್ರಿಗೇಡ್ ನ ವಿಶಿಷ್ಟ ಕಾರ್ಯಕ್ರಮ. ಶೈಕ್ಷಣಿಕ ಕ್ಷೇತ್ರದ ಸಾಧಕರು ಹಾಗೂ ಶಿಕ್ಷಕರನ್ನು ಒಂದು ವೇದಿಕೆಯಲ್ಲಿ ಸೇರಿಸಿ, ಶಿಕ್ಷಕರಿಗೆ ತಮ್ಮ ವೃತ್ತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ತರಬೇತಿ ನೀಡುವುದು.
ಯುವಾ ಬ್ರಿಗೇಡ್ ರಾಜ್ಯದಾದ್ಯಂತ ಆಯೋಜಿಸಿದ ಕಾರ್ಯಕ್ರಮಗಳ ವಿವರಗಳು

 • ದಿನಾಂಕ: 21-03-2021 ರಂದು ಹೊಸಕೋಟೆಯಲ್ಲಿ ಶಿಕ್ಷಕರ ತರಬೇತಿ ಕಾರ್ಯಾಗಾರ ಪ್ರೇರಣಾ ಪ್ರವಾಹ ನಡೆಯಿತು. ಸುಮಾರು 200 ಶಿಕ್ಷಕ-ಶಿಕ್ಷಕಿಯರು ಭಾಗವಹಿಸಿದ್ದರು. ಅನಾರೋಗ್ಯದ ನಡುವೆಯೂ ಪ್ರೀತಿಯಿಂದ ಆಗಮಿಸಿದ ಥಟ್ ಅಂತ ಹೇಳಿ ಖ್ಯಾತಿಯ ಡಾ. ನಾ ಸೋಮೇಶ್ವರ್ ಅವರು ಮತ್ತು ಚಾಮರಾಜನಗರದ ದೀನಬಂಧು ಸಂಸ್ಥೆಯ ಸುನಿಲ್ ಶಿಕ್ಷಕರೊಂದಿಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು. ದೊಡ್ಡಬಳ್ಳಾಪುರದ ಪುಂಷ್ಪಾಂಡಜ ಆಶ್ರಮದ ಸ್ವಾಮಿ ದಿವ್ಯಜ್ಞಾನಾನಂದಜೀ ಆಧ್ಯಾತ್ಮದ ಭೂಮಿಕೆಯನ್ನು ಹಾಕಿಕೊಟ್ಟಿದ್ದು ಬಲು ವಿಶಿಷ್ಟವಾಗಿತ್ತು. ಶಿಕ್ಷಕರ ಆಸಕ್ತಿ, ಶ್ರದ್ಧೆ ವಿಶೇಷವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಕನ್ನಯ್ಯ ಅವರ ಉತ್ಸಾಹ ಸ್ಫೂರ್ತಿ ನೀಡುವಂತಿತ್ತು.
 • ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಯುವಾಬ್ರಿಗೇಡ್ ಸಹಯೋಗದೊಂದಿಗೆ ಶಿಕ್ಷಕ ವೃಂದಕ್ಕಾಗಿ ವಿಶೇಷ ಪ್ರೇರಣಾ ಪ್ರವಾಹ ನಡೆಯಿತು.‌ ಜಿಲ್ಲೆಯ ಸುತ್ತಮುತ್ತಲಿನ ಸ್ಥಳಗಳಿಂದ ಆಸಕ್ತ ಶಿಕ್ಷಕರೆಲ್ಲ ಆಗಮಿಸಿದ್ದರು. ದಿಶಾದ ಪ್ರಮೋದ್, ಧಾರವಾಡದ ಶ್ರೀ ಸುರೇಶ್ ಕುಲಕರ್ಣಿ, ವಿದ್ಯಾರ್ಥಿಗಳಲ್ಲಿ ಕಲೆಯಲ್ಲಿ ಆಸಕ್ತಿ ಮೂಡಿಸುವ ಶಿಕ್ಷಕ ಸುನೀಲ್ ಮಿಶ್ರಾ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದ್ದು ಸ್ವತಃ ಉಪಕುಲಪತಿಗಳಾದ ಡಾ. ಕರಿಸಿದ್ದಪ್ಪನವರು. ಅವರು ಮಾತನಾಡುತ್ತ ಶಿಕ್ಷಕರನ್ನು ನೆನಪಿಸಿಕೊಂಡು ಭಾವುಕರಾದರು. ಸಮಾರೋಪದ ನುಡಿಗಳನ್ನಾಡಿದ ಕುಲಸಚಿವರಾದ ಶ್ರೀ ಆನಂದ್ ದೇಶಪಾಂಡೆಯವರು ಸವಾಲುಗಳುಳ್ಳ ಹೊಸ ಶಿಕ್ಷಣ ನೀತಿಗೆ ನಾವೆಲ್ಲ ಸಜ್ಜಾಗಬೇಕಿದೆ ಎಂದು ಭರವಸೆ ತುಂಬಿದರು. ಭಾಗವಹಿಸಿದ ಶಿಕ್ಷಕರು ಈ ಕಾರ್ಯಾಗಾರದಿಂದ ಸಂತುಷ್ಟರಾದುದು ಅವರ ಮುಖದಲ್ಲಿ ಕಂಡುಬರುತ್ತಿತ್ತು.
 • ಕಲ್ಬುರ್ಗಿಯಲ್ಲಿ ನಡೆದ ಶಿಕ್ಷಕರ ತರಬೇತಿಯ ಪ್ರೇರಣಾ ಪ್ರವಾಹ ಬಲು ಯಶಸ್ವಿ ಎನಿಸಿತು. ರಂಗಮಂದಿರದಲ್ಲಿ 1300ಕ್ಕೂ ಹೆಚ್ಚು ಶಿಕ್ಷಕರು ಸೇರಿಕೊಂಡಿದ್ದರು. ಖ್ಯಾತ ತರಬೇತುದಾರ ಜಯಸಿಂಹ, 30 ವರ್ಷಗಳ ಶಿಕ್ಷಕ ವೃತ್ತಿಯ ಅನುಭವವಿರುವ ಸುರೇಶ್ ಕುಲಕರ್ಣಿ, ಶಿವಮೊಗ್ಗದ ಕಿರಣ್ ಹೆಗ್ಗದ್ದೆಯವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾರ್ಗದರ್ಶನ ಮಾಡಿದರೆ, ಹುಕ್ಕೇರಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿ ಶಿಕ್ಷಕರಿಗೆ ಸ್ಫೂರ್ತಿ ತುಂಬಿದರು. ಪತ್ರಕರ್ತ, ಲೇಖಕ ರವೀಂದ್ರ ದೇಶ್‌ಮುಖ್ ಅವರು ಉಪಸ್ಥಿತರಿದ್ದರು. ಚೇತೋಹಾರಿಯಾದ ಚರ್ಚೆ ಮತ್ತು ಹೊಸ ಶಿಕ್ಷಣ ನೀತಿಯ ಕುರಿತಂತೆ ಒಂದಷ್ಟು ಸಮಾಲೋಚನೆ ಇಡಿಯ ಕಾರ್ಯಕ್ರಮಕ್ಕೆ ಮೆರುಗು ತಂದಿತು. ಹೊರಡುವಾಗ ಅನೇಕ ಶಿಕ್ಷಕರು ಇಂಥದ್ದೊಂದು ತರಬೇತಿಯ ಅಗತ್ಯವಿತ್ತು ಎಂದು ಹೇಳಿದ್ದು ಯುವಾಬ್ರಿಗೇಡ್ ಕಾರ್ಯಕರ್ತರ ಪಾಲಿಗೆ ಸಂಭ್ರಮವೇ ಸರಿ.‌ ಈ ಸಂದರ್ಭದಲ್ಲೇ ಅಂಬಿಕಾ ಸುಬ್ರಹ್ಮಣ್ಯ ಅವರು ಬರೆದಿರುವ ‘ಆಟ ಆಡ್ತಾ ಸ್ವಾತಂತ್ರ್ಯ ಪಾಠ’ ಪುಸ್ತಕವೂ ಬಿಡುಗಡೆಯಾಯ್ತು.
 • ದಿನಾಂಕ:06.02.2021ರಂದು ಹೊಸಪೇಟೆಯಲ್ಲಿ ಶಿಕ್ಷಕರ ತರಬೇತಿ ಕಾರ್ಯಾಗಾರ ಪ್ರೇರಣಾ ಪ್ರವಾಹ ನಡೆಯಿತು. ಶ್ರೀಯುತ ಸುರೇಶ್ ಕುಲಕರ್ಣಿಯವರು ಮತ್ತು ರೋಹಿತ್ ಚಕ್ರತೀರ್ಥ ಭಾಗವಹಿಸಿದ್ದರು. ಪರಮಪೂಜ್ಯ ಸ್ವಾಮಿ ಸುಮೇಧಾನಂದಜೀ ಮಹಾರಾಜ್ ತಮ್ಮ ಗುರುಭಕ್ತಿ ಗೀತೆಗಳ ಮೂಲಕ ಆರಂಭದಲ್ಲಿಯೇ ಭೂಮಿಕೆ ನಿರ್ಮಿಸಿಕೊಟ್ಟಿದ್ದರು. ಸುಮಾರು 6 ಗಂಟೆಗಳ ಕಾಲ ನಡೆದ ಈ ಕಾರ್ಯಾಗಾರ ಮಾಹಿತಿ ಪೂರ್ಣವಾಗಿತ್ತಲ್ಲದೇ ಪ್ರೇರಣಾದಾಯಿಯೂ ಆಗಿತ್ತು.‌ ಇಂತಹ ಕಾರ್ಯಕ್ರಮಗಳನ್ನು ಯಾರೂ ತಪ್ಪಿಸಿಕೊಳ್ಳಬಾರದು ಎಂದು ಶಿಕ್ಷಕರೇ ಕಾರ್ಯಕ್ರಮದ ಕೊನೆಯಲ್ಲಿ ಹೇಳಿದ್ದಲ್ಲದೇ, ಮೇಲಾಧಿಕಾರಿಗಳಿಗೆ ಇದನ್ನು ಮುಟ್ಟಿಸುವುದಾಗಿ ಹೇಳಿದ್ದು ಬಲು ವಿಶೇಷವೆನಿಸಿತ್ತು.
 • ದಿನಾಂಕ:5.02.2021ರಂದು ಚಿತ್ರದುರ್ಗದ ತ.ರಾ.ಸು ರಂಗಮಂದಿರದಲ್ಲಿ ಶಿಕ್ಷಕರ ತರಬೇತಿ ಕಾರ್ಯಾಗಾರ ಪ್ರೇರಣಾ‌ ಪ್ರವಾಹ ನಡೆಯಿತು. 400ಕ್ಕೂ ಹೆಚ್ಚು ಶಿಕ್ಷಕರು ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ಪ್ರೀತಿಯಿಂದ ಭಾಗವಹಿಸಿದ್ದು ಬಲು ವಿಶೇಷ. ಮೊದಲ ಅವಧಿಯನ್ನು ಉದ್ದೇಶಿಸಿ ಮಾತನಾಡಿದ ಖ್ಯಾತ ಲೇಖಕ ರೊಹಿತ್ ಚಕ್ರತೀರ್ಥ ಗಣಿತವನ್ನು ಆಧಾರವಾಗಿರಿಸಿಕೊಂಡು ಸ್ವಾರಸ್ಯಕರ ಬೋಧನೆಗೆ ಸಾವಿರಾರು ಉಪಾಯಗಳ ಕುರಿತಂತೆ ಚರ್ಚೆ ಮಾಡಿದರು. ನಂತರ ಮಾತನಾಡಿದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನ ವಿಶೇಷ ಅಧಿಕಾರಿ ಶ್ರೀಮತಿ ತೇಜಸ್ವಿನಿಯವರು ಹೊಸ ಶಿಕ್ಷಣ ನೀತಿಯ ಕುರಿತಂತೆ ವಿಷದವಾಗಿ ಚರ್ಚಿಸಿದರು. ಆನಂತರ ನಡೆದ ಚರ್ಚೆಯೂ ಕೂಡ ಬಲು ಜೋರಾಗಿತ್ತು. ಶಿಕ್ಷಕರು ತಮ್ಮ ಅನುಭವಗಳನ್ನು ಹಂಚಿಕೊಂಡರು.
 • ‘ಯುವಾಬ್ರಿಗೇಡ್’ ಹಾಗೂ ‘ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯ ನಾರ್ತ್ ಕ್ಯಾಂಪಸ್’ನ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಕರ್ನಾಟಕದ ಶಿಕ್ಷಕರಿಗೆ, ಉಪನ್ಯಾಸಕರಿಗೆ “ಪ್ರೇರಣಾ ಪ್ರವಾಹ” ಎಂಬ ಆನ್ಲೈನ್ ಕಾರ್ಯಾಗಾರ ಏರ್ಪಡಿಸಲಾಗಿತ್ತು.
  ಪದ್ಮಶ್ರೀ ಪುರಸ್ಕೃತರಾದ ಶ್ರೀ ಹರೇಕಳ ಹಾಜಬ್ಬ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ‘ಶಿಕ್ಷಕ – ರಾಷ್ಟ್ರನಿರ್ಮಾಪಕ’ ಎನ್ನುವ ವಿಷಯದ ಕುರಿತು ಡಾ. Arathi Koundinya ರವರು ಮಾತನಾಡುತ್ತಾ ಚಾಣಕ್ಯ ಹಾಗೂ ಮಾಧವಾಚಾರ್ಯರ ಉದಾಹರಣೆ ಕೊಟ್ಟು, ಗುರುಗಳು ಭಾರತವನ್ನು ಕಟ್ಟಿದ ರೀತಿಯನ್ನು ವಿವರಿಸಿದರು. ಭಾರತೀಯ ಗುರು ಪರಂಪರೆಯ ಮಹತ್ವ ತಿಳಿಸಿದರು.
  ಯುವಾಬ್ರಿಗೇಡ್ ನ ಸಂಸ್ಥಾಪಕರಾದ ಶ್ರೀ ಚಕ್ರವರ್ತಿ ಸೂಲಿಬೆಲೆರವರು ಮಾತನಾಡುತ್ತಾ, ಶಿಕ್ಷಕನ ಮೌಲ್ಯವೃದ್ಧಿಗೆ ಹಾಗೂ ಮಕ್ಕಳಿಗೆ ವಿಷಯಾಧಾರಿತ ಶಿಕ್ಷಣದ ಜೊತೆ ಆಲೋಚನಾ ಶಕ್ತಿಯನ್ನು ಹೇಗೆ ಬೆಳೆಸಬೇಕೆಂಬುದರ ಕುರಿತು ಉದಾಹರಣೆಗಳ ಮೂಲಕ ವಿವರಿಸಿದ ಪರಿ ಕೇಳುಗರ ಉತ್ಸಾಹ, ಶಿಕ್ಷಕನ ಆತ್ಮವಿಶ್ವಾಸ ಹೆಚ್ಚಿಸಿತು.
  ಕೇಂಬ್ರಿಡ್ಜ್ ನಾರ್ತ್ ಕ್ಯಾಂಪಸ್ ನ CEO Adviteeya Udaya ರವರು ತಂತ್ರಜ್ಞಾನ ವಿಭಾಗದಲ್ಲಿ ಸಂಶೋಧನೆಯ ಮಹತ್ವ ತಿಳಿಸಿ, ಭಾರತ ಹಾಗೂ ವಿದೇಶಗಳಲ್ಲಿರುವ ವ್ಯತ್ಯಾಸ ಹಾಗೂ ಇಲ್ಲಿನ ವ್ಯವಸ್ಥೆಗಳ ಕುರಿತು ಬದಲಾಗಬೇಕಾದ ಸಂಗತಿಗಳ ಕುರಿತು ವಿವರಿಸಿದರು.
  ಕಾರ್ಯಕ್ರಮದ ಅಂದವನ್ನು ಮತ್ತಷ್ಟು ಹೆಚ್ಚಿಸಿ ಶೋಭೆ ತಂದುಕೊಟ್ಟದ್ದು ಶ್ರೀ ಮನೋಜ್ ವಸಿಷ್ಠ ಹಾಗೂ ಅರುಂಧತಿ ವಸಿಷ್ಠರವರು ಕುವೆಂಪು ರಚಿಸಿರುವ ‘ಅಂತರತಮನೀ ಗುರು, ನೀ ಆತ್ಮತಮೋಹಾರಿ’ ಹಾಡು. ಕಾರ್ಯಾಗಾರದ ವಿಶೇಷ ಅವಧಿಗಳ ಮಧ್ಯೆ ಎಲ್ಲರ ಮನಸೂರೆಗೊಂಡಿತು.
  2 ಗಂಟೆ 5 ನಿಮಿಷ ನಡೆದ ಕಾರ್ಯಾಗಾರದ ಲೈವ್ ವೀಕ್ಷಣೆಯಲ್ಲಿ ಸತತವಾಗಿ 630+ ಜನ ಭಾಗವಹಿಸಿದ್ದರು! ಪ್ರತಿಕ್ರಿಯೆಯಾಗಿ ಎಲ್ಲಾ ಶಿಕ್ಷಕರಿಂದಲೂ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ, ಇನ್ನೂ ಕೆಲವರು ತುಂಬು ಮನಸ್ಸಿನಿಂದ ಅಭಿನಂದನೆ ಸಲ್ಲಿಸಿದ್ದರೆ ಮತ್ತೂ ಕೆಲವರು ಕವನಗಳ ಮೂಲಕ ಕಾರ್ಯಕ್ರಮದ ಕುರಿತು ಅಭಿಪ್ರಾಯ ತಿಳಿಸಿದ್ದಾರೆ. ಬಹುತೇಕ ಮಂದಿ ಈ ತರಹದ ಕಾರ್ಯಾಗಾರ ತಿಂಗಳಿಗೊಮ್ಮೆ ಅಥವಾ ಕನಿಷ್ಠ ಮೂರು ತಿಂಗಳಿಗೊಮ್ಮೆಯಾದರೂ ಆಯೋಜಿಸಿ ಎಂದು ವಿನಂತಿಸಿದ್ದಾರೆ.

top