ದೌಡ್ ಓಡ್ ‌ಲೇ

ದೌಡ್ ಓಡ್ ‌ಲೇ

ಉತ್ತರ ಕರ್ನಾಟಕಕ್ಕೆ ಭೀಕರವಾದ ಪ್ರವಾಹ ಬಂದಿದ್ದನ್ನು ಅನೇಕರು ಮರೆತೇಬಿಟ್ಟಿದ್ದಾರೆ. ಯುವಾಬ್ರಿಗೇಡ್ ಹಾಗಲ್ಲ‌. ಜನರಿಗೆ ತಾತ್ಕಾಲಿಕವಾಗಿ ಬೇಕಾದ ಸಹಕಾರಗಳನ್ನು ಕೊಟ್ಟಿದ್ದಲ್ಲದೇ ಮಧ್ಯಮಾವಧಿಗೆಂದೇ ಕಷ್ಟಕಾಲದ ಗೆಳೆಯದಂತಹ ಯೋಜನೆಗಳನ್ನು ತಂದು ದೀರ್ಘಾವಧಿಯಲ್ಲಿ ಜೊತೆಯಲ್ಲಿ ನಿಲ್ಲಲು ಹತ್ತು ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದೆವು. ಆ ಶಾಲೆಗಳಿಗೆ ಸುಣ್ಣ-ಬಣ್ಣ ಮಾಡಿಸಿದ್ದಲ್ಲದೇ ಮಕ್ಕಳಿಗೆ ಅಗತ್ಯವಾಗಿ ಬೇಕಾದ ಸೌಕರ್ಯಗಳನ್ನೂ ಒದಗಿಸಿಕೊಡುತ್ತಿದ್ದೇವೆ. ೨೦೨೦ರ ಜನವರಿ ೪ ರಂದು ಈ ಹತ್ತೂ ಶಾಲೆಗಳ ಅಂತರ್ ಶಾಲಾಮಟ್ಟದ ಕ್ರೀಡಾಕೂಟ #ದೌಡ್_ಓಡ್‌ಲೇ ಗೋಕಾಕ್‌ನಲ್ಲಿ ನಡೆಯಿತು. ಬೆಳಿಗ್ಗೆ ಬಿರುಬಿಸಿಲಿನಲ್ಲಿ ಪಥಸಂಚಲನದೊಂದಿಗೆ ಆರಂಭವಾದ ಈ ಕ್ರೀಡಾಕೂಟದಲ್ಲಿ ಮಕ್ಕಳು ನಾವೇ ಕೊಟ್ಟ ಜೆರ್ಸಿ ಮತ್ತು ಟ್ರ್ಯಾಕ್‌ಸೂಟ್ ಧರಿಸಿ ಆಟವಾಡಲು ಮೈದಾನಕ್ಕಿಳಿದಾಗ ಮೈದಾನದ ತುಂಬೆಲ್ಲಾ ಬಣ್ಣದ ಚಿಟ್ಟೆಗಳು ಹಾರಾಡುತ್ತಿರುವಂತೆ ಭಾಸವಾಯ್ತು. ಓಟದಲ್ಲಿ, ಗುಂಪು ಕ್ರೀಡೆಗಳಲ್ಲಿ ಮತ್ತು ಮನೋರಂಜನಾ ಆಟಗಳಲ್ಲೂ ಮಕ್ಕಳ ಭಾಗವಹಿಸುವಿಕೆ ಅಮೋಘವಾಗಿತ್ತು. ಭಿನ್ನ ಭಿನ್ನ ಶಾಲೆಗಳಿಂದ ಬಂದಿದ್ದ ದೈಹಿಕ ಶಿಕ್ಷಕರು, ಮುಖ್ಯಶಿಕ್ಷಕರು, ಶಿಕ್ಷಕಿಯರು ಕೂಡ ಪೂರ್ಣಮನಸ್ಸಿನಿಂದ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದರು. ಆರಂಭದಲ್ಲಿ ಸುಸ್ತಾದಂತಿದ್ದ ಮಕ್ಕಳ ಮುಖ ಮೈದಾನದಲ್ಲಿ ಆಟೋಟಕ್ಕಿಳಿಯುತ್ತಿದ್ದಂತೆ ಚೈತನ್ಯದ ಚಿಲುಮೆಯಂತೆ ಕಾಣಲಾರಂಭಿಸಿತು. ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೂ ಕ್ರೀಡೆಗಳು ನಡೆದರೂ ಉತ್ಸಾಹ ಮಾತ್ರ ಇನಿತೂ ಇಂಗಿರಲಿಲ್ಲ. ಕೊನೆಯಲ್ಲಿ ವಿಕ್ಟರಿ ಬೆಂಚಿನ ಮೇಲೆ ನಿಂತು ಪದಕಗಳನ್ನು ಕೊರಳಿಗೆ ಹಾಕಿಕೊಳ್ಳುವಾಗ ಆ ಮಕ್ಕಳ ಮುಖವನ್ನು ನೋಡಬೇಕಿತ್ತು. ಖಾಸಗಿ ಶಾಲೆಯ ಮಕ್ಕಳಿಗೆ ಮಾತ್ರ ಸಿಗುವ ಸೌಲಭ್ಯವನ್ನು ಉತ್ತರ ಕರ್ನಾಟಕದ ಈ ಸರ್ಕಾರಿ ಶಾಲೆಯ ಮಕ್ಕಳಿಗೂ ದೊರಕಿಸಿಕೊಡಬೇಕೆಂಬ ನಮ್ಮ ಪ್ರಯತ್ನದ ಮೊದಲ ಹೆಜ್ಜೆ ಸಾರ್ಥಕವಾಗಿದೆ. ಬೆಳಿಗ್ಗೆ ಹುಕ್ಕೇರಿ ಶ್ರೀಗಳು ಬಂದು ಆಶೀರ್ವದಿಸಿ ಸಂಘಟನೆ ಇಡುತ್ತಿರುವ ಹೆಜ್ಜೆಯನ್ನು ಮುಕ್ತಕಂಠದಿಂದ ಶ್ಲಾಘಿಸಿ ಹೋದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಂತೂ ಈ ಶಾಲೆಗಳ ಅಭಿವೃದ್ಧಿಗೆ ಪೂರ್ಣ ಸಹಕಾರ ನೀಡುವ ಮಾತನಾಡಿದರೆ ಮುಖ್ಯೋಪಾಧ್ಯಾಯರುಗಳು ನಮ್ಮ ಚಟುವಟಿಕೆಗಳಲ್ಲಿ ಬಲವಾಗಿ ಆತುಕೊಳ್ಳುವ ಭರವಸೆ ತುಂಬಿದರು. ನಮಗೆ ಸಹಕರಿಸಿದ ಸನ್‌ಸೆರಾ ಕಂಪೆನಿಗೂ ಹೃತ್ಪೂರ್ವಕವಾದ ಧನ್ಯವಾದಗಳು.

top