ಗುರು ಗೌರವ – Fight Corona

ಗುರು ಗೌರವ – Fight Corona

ಕರೋನಾ ಎಲ್ಲರನ್ನೂ ಸೋತು ಸುಣ್ಣವಾಗಿಸಿದೆ. ಕರೋನಾ ಮೊದಲನೇ ಅಲೆಯ ಸಮಯದಿಂದಲೂ ಸಂಕಷ್ಟಕ್ಕೆ ಸಿಲುಕಿದ್ದ ಖಾಸಗಿ ಶಾಲಾ ಶಿಕ್ಷಕರನ್ನು ಯಾರೂ ಗಣಿಸಿಯೇ ಇರಲಿಲ್ಲ. ಯುವಾಬ್ರಿಗೇಡ್ ಈ ಎರಡನೇ ಅಲೆಯ ವೇಳೆ ಖಾಸಗಿ ಶಾಲಾ ಶಿಕ್ಷಕರೊಡನೆ ನಿಲ್ಲುವ ಮಹತ್ವದ ಯೋಜನೆ ‘ಗುರುಗೌರವ’ವನ್ನು ರೂಪಿಸಿತು. ಖಾಸಗಿ ಶಾಲಾ ಶಿಕ್ಷಕರಿಗೆ 10-15 ದಿನಗಳಿಗಾಗುವಷ್ಟು, ಸುಮಾರು 1000 ರೂಪಾಯಿಯ ರೇಷನ್ ಕಿಟ್ ಕೊಡುವ ಈ ಯೋಜನೆ ಆರಂಭವಾಗಿದ್ದು ಬೆಂಗಳೂರಿನಲ್ಲಿ. ಮೊದಲನೇ ದಿನ 600 ಕಿಟ್ ಗಳನ್ನು ತಯಾರಿಸಲಾಯ್ತು. ಈ ಕಿಟ್ ಗಳಲ್ಲಿ ಅಕ್ಕಿ, ಬೇಳೆ, ರವೆ, ಗೋಧಿ, ಸಕ್ಕರೆ, ಅವಲಕ್ಕಿ, ಅಡುಗೆ ಎಣ್ಣೆಗಳನ್ನು ನೀಡಲಾಗುತ್ತಿದೆ. ಆದರೆ, ಆನಂತರ ರಾಜ್ಯಾದ್ಯಂತ ಸುಮಾರು 12,000 ಶಿಕ್ಷಕರು ಯುವಾಬ್ರಿಗೇಡ್ ಗೆ ಕರೆಮಾಡಿ ನೋಂದಾಯಿಸಿಕೊಂಡರು. ಅವರೆಲ್ಲರಿಗೂ ಕಿಟ್ ಅನ್ನು ವಿತರಿಸುವ ನಿಶ್ಚಯ ಮಾಡಿತು ಯುವಾಬ್ರಿಗೇಡ್.

ಮೊದಲ ಹಂತದ ಸುಮಾರು 5500 ಕಿಟ್ ಗಳ ತಯಾರಿಕೆ ಹುಬ್ಬಳ್ಳಿಯಲ್ಲಿ ನಡೆಯಿತು. 30-40 ಕಾರ್ಯಕರ್ತರು ನಾಲ್ಕು ದಿನಗಳಲ್ಲಿ 5500 ರೇಷನ್ ಕಿಟ್ ಗಳನ್ನು ತಯಾರಿಸಿ ಅದನ್ನು ಬಳ್ಳಾರಿ, ಕಲ್ಬುರ್ಗಿ, ಶಿವಮೊಗ್ಗ, ಹಾವೇರಿ, ಬೀದರ್, ಉತ್ತರ ಕನ್ನಡಗಳಿಗೆ ತಲುಪಿಸಿತು.

ನಮಗೆ ಬಂದ ಕರೆಗಳನ್ನು ಆಯಾ ಜಿಲ್ಲೆಯ ಕಾರ್ಯಕರ್ತರು ಪರೀಕ್ಷಿಸಿ, ಅವರಿಗೆ ಕರೆಮಾಡಿ ಅದನ್ನು ಖಾಸಗಿ ಶಾಲಾ ಶಿಕ್ಷಕರಿಗೆ ತಲುಪಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಕೆಲಸ ನಡೆಯುವ ಸಂದರ್ಭದಲ್ಲಿ ಹುಬ್ಬಳ್ಳಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ರಘುವೀರಾನಂದಜೀ ಮಹಾರಾಜ್, ಮೂರುಸಾವಿರ ಮಠದ ಜಗದ್ಗುರುಗಳು, ವಿಧಾನ ಪರಿಷತ್ ಸಭಾಪತಿಗಳಾಗಿರುವ ಬಸವರಾಜ್ ಹೊರಟ್ಟಿಯವರು, ಮತ್ತಿತರ ಹುಬ್ಬಳ್ಳಿಯ ಗಣ್ಯರು ಭೇಟಿ ನೀಡಿದ್ದರು. ಎರಡನೇ ಹಂತದ ರೇಷನ್ ತಯಾರಿಕೆ ಮೈಸೂರಿನಲ್ಲಿ, ನಂತರ ಬೆಂಗಳೂರಿನಲ್ಲಿ ನಡೆಯಿತು.

top