ಎದೆ ಭಾಷೆ

ಎದೆ ಭಾಷೆ

ಕನ್ನಡ ಭಾಷೆಯ ಸೊಗಸು ಅದರ ವಿವಿಧತೆಯಲ್ಲಿದೆ. ಬೀದರ್‌ನಿಂದ ಮಡಿಕೇರಿಯವರೆಗೂ ಭಿನ್ನ ಶೈಲಿಯ ಮಾತು ಒಂದೇ ಕನ್ನಡದ ಛಾಯೆಯಲ್ಲಿದೆ. ಅನೇಕ ಬಾರಿ ದಕ್ಷಿಣದವರಿಗೆ ಉತ್ತರದವರ ಮಾತು ಅರ್ಥವೇ ಆಗುವುದಿಲ್ಲ. ಇನ್ನೂ ಕೆಲವು ಬಾರಿ ಉತ್ತರದವರು ದಕ್ಷಿಣದವರ ಮಾತುಗಳನ್ನು ಕೇಳಿ ಪಿಳಿ-ಪಿಳಿ ಕಣ್ಬಿಡುವುದೂ ಉಂಟು. ಆದರೆ ನಮ್ಮೆಲ್ಲರದ್ದೂ ಒಂದೇ ಕನ್ನಡ ಪರಿವಾರ. ಕನ್ನಡದ ಈ ಭಾಷಾ ವೈವಿಧ್ಯದ ಕುರಿತಂತೆ ಶಿವಮೊಗ್ಗದ ಕಾರ್ಯಕ್ರಮವೇ ಎದೆಭಾಷೆ, ಕನ್ನಡದ ವಿಭಿನ್ನ ಶೈಲಿಗಳ ಭಾಷೆಯ ಕುರಿತಂತೆ ಚರ್ಚೆ ಮತ್ತು ಮನರಂಜನೆಯ ಮಾತುಗಳು ನಿಸ್ಸಂಶಯವಾಗಿ ಹೊಸ ಚಿಂತನೆಯನ್ನೇ ಹುಟ್ಟು ಹಾಕಿದವು. ಚಾಮರಾಜನಗರ, ಬೀದರ್‌, ಕುಂದಾಪುರ, ಮಂಡ್ಯಗಳ ವಿಭಿನ್ನ ಶೈಲಿಯ ಕನ್ನಡದ ಸಮಾಗಮ ಮುದ ನೀಡುವಂತಿತ್ತು. ಬೆಳಿಗ್ಗೆ ಈ ವೈವಿಧ್ಯದ ಕುರಿತಂತಹ ಚರ್ಚಾಗೋಷ್ಠಿಯಲ್ಲಿ ಹಂಪಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರೊಫೆಸರ್‌ಗಳಾಗಿರುವ ಪಾಂಡುರಂಗ ಬಾಬು, ಮಾಧವ್ ಪೆರಾಜೆಯವರಲ್ಲದೇ ಬೀದರ್‌ನ ಸಾಹಿತಿ ಶಿವಲಿಂಗ ಹೇಡೆ, ಚಾಮರಾಜನಗರದ ಜಯಪ್ಪ, ಜೊತೆಗೆ ಕುಂದಾಪುರದಿಂದ ಮನು ಹಂದಾಡಿ ಮತ್ತು ಶಿವಮೊಗ್ಗದ ಕಿರಣ್ ಹೆಗ್ಗದೆ ಭಾಗವಹಿಸಿದರೆ, ಚಿತ್ರ ಸಾಹಿತಿಯಾಗಿ ಚರ್ಚೆಗೆ ಸಮರ್ಪಕ ಒಗ್ಗರಣೆ ಹಾಕಿದವರು ಸನ್ಮಿತ್ರ ವಿ. ನಾಗೇಂದ್ರ ಪ್ರಸಾದ್. 300ಕ್ಕೂ ಹೆಚ್ಚು ಜನ ಮೂರು ಗಂಟೆಯ ಈ ಚರ್ಚಾಗೋಷ್ಠಿಯಲ್ಲಿ ಪಾಲ್ಗೊಂಡು ಚೇತೋಹಾರಿಯಾದ ಪ್ರಶ್ನೋತ್ತರ ನಡೆಸಿಕೊಟ್ಟಿದ್ದು ಈಗಲೂ ಕಿವಿಗಳಲ್ಲಿ ಅನುರಣಿಸುತ್ತಿದೆ. ಭಾಷೆಯ ಕುರಿತಂತಹ ಚರ್ಚೆಯೊಂದು ಇಷ್ಟು ಸ್ವಾರಸ್ಯಕರವಾಗಿರುವುದು ಸಾಧ್ಯವೇ ಎಂದು ಎಲ್ಲರೂ ಚಕಿತಗೊಂಡಿದ್ದಾರೆ. ಸಂಜೆ ಕಿಕ್ಕಿರಿದು ತುಂಬಿದ್ದ ಕಲಾಮಂದಿರದಲ್ಲಿ ಚಾಮರಾಜನಗರದ, ಕುಂದಾಪುರದ ಭಾಷೆಗಳಲ್ಲಿ ಹಾಸ್ಯ ರಸಾಯನವನ್ನು ಉಣಬಿಡಿಸಿದರೆ, ಪ್ರಾಣೇಶ್‌ರವರು ಉತ್ತರ ಕರ್ನಾಟಕದ ಭಾಷೆಯನ್ನು ಸೊಗಸಾಗಿ ಕಟ್ಟಿಕೊಡುವ ಮೂಲಕ ಕಾರ್ಯಕ್ರಮಕ್ಕೆ ರಂಗೇರಿಸಿಬಿಟ್ಟರು. ಒಂದೇ ಮಾತಿನಲ್ಲಿ ಹೇಳುವುದಾದರೆ ನವೆಂಬರ್ ತಿಂಗಳನ್ನು ಮುಗಿಸುವ ಮುನ್ನ ನಡೆದ ಈ ಕಾರ್ಯಕ್ರಮ ಇದುವರೆಗಿನ ಯುವಾಬ್ರಿಗೇಡ್‌ನ ಕನ್ನಡ ಮಾತೆಗೆ ಸಮರ್ಪಣೆಗೊಂಡ ಸುಂದರ ಪುಷ್ಪಗಳಲ್ಲೊಂದು.

top