ಆತ್ಮನಿರೀಕ್ಷಣೆಗಾಗಿ ಸತ್ಯಾಗ್ರಹ

ಆತ್ಮನಿರೀಕ್ಷಣೆಗಾಗಿ ಸತ್ಯಾಗ್ರಹ

ಯಾರನ್ನೂ ದೂಷಿಸದ, ನಿಂದಿಸದ, ಬಲವಂತದ ಆಗ್ರಹಗಳನ್ನು ಹೊಂದಿರದ, ಸ್ವಾರ್ಥರಹಿತವಾದ ಸತ್ಯಾಗ್ರಹವನ್ನು ಹೀಗೆ ನಡೆಸಬಹುದೆಂಬ ಕಲ್ಪನೆಯನ್ನು ಸಾಕಾರಗೊಳಿಸಿಕೊಟ್ಟಿದ್ದು ಯುವಾಬ್ರಿಗೇಡ್. ಈ ಹೋರಾಟ ಹೊರಗಿನವರೊಂದಿಗಲ್ಲ ನಮಗೆ ನಾವೇ ರೂಪಿಸಿಕೊಳ್ಳುವ ಚೌಕಟ್ಟಿನದ್ದು. ಹಾಗಾಗಿ ಸತ್ಯಾಗ್ರಹ ಪರಿಕಲ್ಪನೆಯನ್ನು ಹುಟ್ಟುಹಾಕಿದ ಮಹಾತ್ಮಾ ಗಾಂಧೀಜಿ ಹಾಗೂ ಭಾರತದ ಹೆಮ್ಮೆಯ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯ ಪ್ರಯುಕ್ತ ದಿನಾಂಕ: 02/10/2020 ರಂದು ಯುವಾ ಬ್ರಿಗೇಡ್ ಕರ್ನಾಟಕದಾದ್ಯಂತ “ಆತ್ಮನಿರೀಕ್ಷಣೆಗಾಗಿ ಸತ್ಯಾಗ್ರಹ” ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿತು.

 • ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯ ನಿಮಿತ್ತ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಯುವಾ ಬ್ರಿಗೇಡ್ ಕಾರ್ಯಕರ್ತರು ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನದ ಸಹೋದರಿಯರಿಂದ “ಆತ್ಮನಿರೀಕ್ಷಣೆಗಾಗಿ ಸತ್ಯಾಗ್ರಹ” ಕಾರ್ಯಕ್ರಮ ಆಯೋಜಿಸಿತು. ಗಾಂಧೀಜಿಯವರ ಆಶಯದ ಎಂಟು ವಿಭಿನ್ನ ಸಂಕಲ್ಪಗಳನ್ನು ರೂಪಿಸಿಕೊಂಡು ಅದಕ್ಕಾಗಿ ಫ್ರೀಡಂ ಪಾರ್ಕಿನಲ್ಲಿ ಒಂದಿಡೀ ದಿನ ನೂರಕ್ಕೂ ಹೆಚ್ಚು ಜನ ಉಪವಾಸ ಕುಳಿತಿದ್ದರು. ಆತ್ಮನಿರೀಕ್ಷಣೆಗಾಗಿ ನಡೆದ ಈ ಉಪವಾಸದ ಹೊತ್ತಿನಲ್ಲಿ ಗಾಂಧೀಜಿಯವರ ಕುರಿತಂತೆ ಸಾಕಷ್ಟು ಚರ್ಚೆಯಾಯ್ತು.
 1. ಹಿರಿಯರಾದ ಗಾಂಧಿವಾದಿ ವೇಮಗಲ್ ಸೋಮಶೇಖರ್‌ರವರು ಸನ್ಮಾನ ಸ್ವೀಕರಿಸಿ ಗಾಂಧೀಜಿಯವರ ಬದುಕಿನ ಸ್ವಾರಸ್ಯಕರ ಘಟನೆಗಳನ್ನು ವಿವರಿಸಿದರು.
 2. ಡಾ.ಗುರುರಾಜ್ ಕರ್ಜಗಿಯವರು ತಮ್ಮ ಎಂದಿನ ಅಸ್ಖಲಿತ ವಾಣಿಯಿಂದ ಗಾಂಧೀಜಿಯವರ ಬದುಕು ಎಷ್ಟು ಉನ್ನತವಾದ್ದು ಎಂಬುದನ್ನು ಎಳೆ-ಎಳೆಯಾಗಿ, ಮನೋಜ್ಞವಾಗಿ ಬಿಡಿಸಿಟ್ಟರು.
 3. ಬೇಲಿ ಮಠಾಧೀಶರು ಬಸವಣ್ಣನವರು ಹಾಕಿಕೊಟ್ಟ ಮಾರ್ಗದಲ್ಲಿದ್ದ ಕರ್ನಾಟಕಕ್ಕೆ ಗಾಂಧೀಜಿಯವರ ಚಿಂತನೆಗಳನ್ನು ಸ್ವೀಕರಿಸಲು ಕಷ್ಟವಾಗಲಿಲ್ಲ ಎಂಬುದನ್ನು ಹರ್ಡೇಕರ್ ಮಂಜಪ್ಪನವರ ಉದಾಹರಣೆಯೊಂದಿಗೆ ವಿವರಿಸಿದ್ದು ಮನಮುಟ್ಟುವಂತಿತ್ತು.
 4. ವಿಧಾನಸಭೆಯ ಸಭಾಧ್ಯಕ್ಷರಾಗಿರುವ ಶ್ರೀ ವಿಶ್ವೇಶ್ವರ ಹೆಗ್ಡೆ ಕಾಗೇರಿಯವರು ಭಾರತದ ಇತಿಹಾಸದುದ್ದಕ್ಕೂ ಇರುವ ಮಹಾಪುರುಷರನ್ನು ನೆನಪಿಸಿಕೊಳ್ಳುತ್ತಾ ಗಾಂಧೀಜಿ ಅದೇ ಶ್ರೇಷ್ಠ ಪರಂಪರೆಯ ಮುಂದುವರೆದ ಭಾಗ ಹೇಗೆ ಎಂಬುದನ್ನು ವಿವರಿಸಿದರಲ್ಲದೇ ತಮ್ಮ ಮಾತಿನ ಕೊನೆಯಲ್ಲಿ ಗದ್ಗದಿತರಾಗಿ ಭಾವನೆಗಳ ಅಶ್ರುತರ್ಪಣವನ್ನು ಗಾಂಧೀಜಿಗೆ ಸಮರ್ಪಿಸಿದರು.
 5. ದೂರದ ಕೊಪ್ಪಳದಿಂದ ಆಗಮಿಸಿದ್ದ ಸಿದ್ಧಲಿಂಗ ಸ್ವಾಮೀಜಿಯವರು ಅಲ್ಪ ಸಮಯದಲ್ಲೇ ಗಾಂಧೀಜಿಯವರ ಅಗಾಧ ವ್ಯಕ್ತಿತ್ವವನ್ನು ಹಿಡಿದಿಟ್ಟಿದ್ದು ವಿಶೇಷವಾಗಿತ್ತು.
 6. ಕಾರ್ಯಕ್ರಮವನ್ನು ಧ್ವಜಾರೋಹಣ ಮಾಡುವ ಮೂಲಕ ಉದ್ಘಾಟಿಸಿದ ಅಭಿನವ ಹಾಲಶ್ರೀ ಸ್ವಾಮೀಜಿಯವರು ಕಾರ್ಯಕ್ರಮದ ಕೊನೆಯವರೆಗೂ ಇದ್ದು ಕಾರ್ಯಕರ್ತರಿಗೆಲ್ಲ ವಿಶೇಷವಾದ ಶಕ್ತಿ ತುಂಬಿದರು.
 7. ಈ‌ ಹೊತ್ತಿನಲ್ಲಿಯೇ ಶ್ರೀಯುತ ರಮೇಶ್ ಅಂಕೋಲಾ ಅವರ ತಂಡದಿಂದ ಗೀತಪ್ರಸ್ತುತಿ ಇತ್ತು.
 8. ಮನೋಜ್ ವಸಿಷ್ಠ ಮತ್ತು ಅರುಂಧತಿ ವಸಿಷ್ಠ ಅವರು ಗಾಂಧೀಜಿಯವರ ಮೆಚ್ಚಿನ ವೈಷ್ಣವ ಜನತೋ ಹಾಡಿದರಲ್ಲದೇ ರಘುಪತಿ ರಾಘವ ರಾಜಾರಾಮ್ ಹಾಡಿಸಿದರೂ ಕೂಡ.
 9. ದೊಡ್ಡ ಬಳ್ಳಾಪುರದಲ್ಲಿ ಕೊರೋನಾ ಪೀಡಿತರುಳ್ಳ ಸ್ಥಳಕ್ಕೆ ಹೋಗಿ ಕಳೆದ ಮೂರು ತಿಂಗಳಿಂದ ಯೋಗ ಹೇಳಿಕೊಡುತ್ತಿರುವ ಬಾಲಕೃಷ್ಣ ಎಂಬ ತರುಣನನ್ನು ಸನ್ಮಾನಿಸಲಾಯ್ತು.
  ಬೆಳಿಗ್ಗೆ 8 ರಿಂದ ಸಂಜೆ 4ರವರೆಗೂ ಬಲು ಆಸ್ಥೆಯಿಂದಲೇ ಕುಳಿತಿದ್ದ ಸತ್ಯಾಗ್ರಹಿಗಳು ತಮ್ಮ ಸಂಶಯಗಳಿಗೆ ಪರಿಹಾರ ಪಡೆದುಕೊಂಡರಲ್ಲದೇ ತಾವು ಕಲಿತ ಅನೇಕ ವಿಚಾರಗಳನ್ನು ಎಲ್ಲರ ಮುಂದೆ ಹಂಚಿಕೊಂಡರೂ ಕೂಡ. ಒಟ್ಟಿನಲ್ಲಿ ಬಹುಕಾಲ ನೆನಪಿರಬಲ್ಲ ದಿನವಾಗಿ ಗಾಂಧೀಜಯಂತಿ ಮಾರ್ಪಟ್ಟಿತು‌.
 • ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯ ನಿಮಿತ್ತ ಮೈಸೂರು, ಚಾಮರಾಜನಗರ, ಬಾಗಲಕೋಟೆ, ಹೊಸಕೋಟೆ, ಮಂಡ್ಯ, ಗದಗ, ಹೊಸಪೇಟೆ, ಮಂಗಳೂರು,ಚಿತ್ರದುರ್ಗ, ಬೆಳಗಾವಿ ಜಿಲ್ಲೆಯ ಹುದಲಿ, ಯಾದಗಿರಿ, ಹಾವೇರಿ, ಶಿವಮೊಗ್ಗ, ಕುಂದಾಪುರ, ಕಲಬುರಗಿ, ರಾಯಚೂರು, ಹುಮನಾಬಾದ್, ಚಿಕ್ಕಮಗಳೂರು, ಭಾಲ್ಕಿ, ಧಾರವಾಡದ ನೂರಾರು ಯುವಾ ಬ್ರಿಗೇಡ್ ಕಾರ್ಯಕರ್ತರಿಂದ “ಆತ್ಮನಿರೀಕ್ಷಣೆಗಾಗಿ ಸತ್ಯಾಗ್ರಹ” ನಡೆಸಲಾಯಿತು.
top